ಬ್ಲಾಗಿನ ಪರಿಚಯ
ಕನ್ನಡದಲ್ಲಿ ಅನೇಕ ಪುಸ್ತಕಗಳು, ಅನೇಕ ಪ್ರಕಾಶಕರುಗಳಿಂದ ದಿನಂಪ್ರತಿ ಪ್ರಕಟವಾಗುತ್ತಲೇ ಇರುತ್ತವೆ. ಆದರೆ ಇಡೀ ರಾಜ್ಯದಲ್ಲಿ ಪ್ರಕಟವಾದ ಪುಸ್ತಕಗಳ ವಿವರಗಳನ್ನು ಒಂದು ಕಡೆಯಿಂದ ಪಡೆಯುವ ಸಾಧ್ಯತೆಯಿಲ್ಲ. ದಿನಪತ್ರಿಕೆಗಳಲ್ಲಿ ಪ್ರಕಟವಾಗುವ `ಸಾದರ ಸ್ವೀಕಾರ'ದ ಮೂಲಕವೋ ಅಥವಾ ಪತ್ರಿಕೆಯವರು ಪ್ರಕಟಿಸುವ ` ಹೊಸ ಪ್ರಕಟಣೆಗಳು' ಮೂಲಕವೋ, ಪುಸ್ತಕ ಮೇಳಗಳ ಸಂದರ್ಭದಲ್ಲೋ ಕೆಲವೊಂದು ಪ್ರಕಟಣೆಗಳ ವಿವರ ತಿಳಿಯುತ್ತದೆ.ಆದರೆ ಇದು ನಗಣ್ಯ ಪ್ರಮಾಣ. ಒಬ್ಬ ಓದುಗನು ಎಲ್ಲಾ ಪತ್ರಿಕೆಗಳನ್ನೂ ಓದುತ್ತಿರುವುದೂ ಅಸಾಧ್ಯ. ಸಾಹಿತ್ಯ ಅಕಾದೆಮಿಯೋ ಪ್ರಾಧಿಕಾರವೋ ಸಾಹಿತ್ಯ ಪರಿಷತ್ತೋ ಇದುವರೆಗೆ ಪ್ರಕಟವಾದ ಎಲ್ಲ ಕನ್ನಡ ಪುಸ್ತಕಗಳ ವಿವರಗಳನ್ನು ಸಂಗ್ರಹಿಸಿ ಪಟ್ಟಿ ಮಾಡುವುದು ಸಾಧ್ಯವಿದೆ. ಆದರೆ ಯಾರಾದರೂ ಆ ಕೆಲಸವನ್ನು ಮಾಡಿದ್ದಾರೆಯೇ ಎಂಬ ಪ್ರಶ್ನೆಗೆ ಬಹುಶಃ `ಇಲ್ಲ' ಎಂದು ಹೇಳಿಬಿಡಬಹುದು. (ಹಾಗೊಮ್ಮೆ ಇದ್ದರೆ ದಯವಿಟ್ಟು ನನಗೆ ತಿಳಿಸಿ. ಡುಪ್ಲಿಕೇಟ್ ಕೆಲಸ ಏಕೆ?)
ಒಂದು ಪುಸ್ತಕದ ಅಂಗಡಿಯನ್ನು ಹೊಕ್ಕರೆ ಅಲ್ಲಿರುವ ಪುಸ್ತಕಗಳು ಯಾವುವು ಎಂಬುದನ್ನು ತಿಳಿಯಲು ನೀವು ಒಂದು ಕಡೆಯಿಂದ ನೋಡಿಕೊಂಡು ಬರಬೇಕು. ಎತ್ತರದಲ್ಲಿರುವ ಪುಸ್ತಕಗಳನ್ನು ನೋಡಲೂ ಆಗುವುದಿಲ್ಲ. ಹಾಗೆ ನೋಡಲು ಹೋದರೂ ಎಷ್ಟು ಅಂಗಡಿಗಳನ್ನು ನೋಡಲು ಸಾಧ್ಯ? ಎಷ್ಟು ಊರುಗಳಲ್ಲಿ ಸಾಧ್ಯ? ಎಷ್ಟು ಜನಕ್ಕೆ ಸಾಧ್ಯ? ಬಹಳಷ್ಟು ಮಾರಾಟಗಾರರು ತಮ್ಮಲ್ಲಿ ಸಿಗುವ ಪುಸ್ತಕಗಳ ಪಟ್ಟಿಯನ್ನು ಕಂಪ್ಯೂಟರ್ ಗೂ ಹಾಕಿಲ್ಲ. ನನಗೆ ಸ್ವತಹ ಈ ಮಾಹಿತಿ ಕೊರತೆಯ ಅನುಭವವಾದಾಗ, ನನ್ನ ಕೈಲಾದ ರೀತಿಯಲ್ಲಿ ಈ ಬಗ್ಗೆ ಏನಾದರೂ ಮಾಡಲು ಸಾಧ್ಯವೇ ಎಂದು ಬಹುವಾಗಿ ಯೋಚಿಸಿ ಈ ಕಾಲದ ಅದ್ಭುತ ಆವಿಷ್ಕಾರವಾದ ಕಂಪ್ಯೂಟರ್ ಹಾಗೂ ಅನೂಹ್ಯ ವಿಸ್ಮಯವಾದ ಅಂತರ್ಜಾಲಗಳನ್ನು ಬಳಸಿಕೊಂಡು ಒಂದು ಮಾಹಿತಿ ಕೋಶವನ್ನು ರೂಪಿಸುವ ಐಡಿಯಾ ಬಂತು. ವಿಶ್ವ ಕುಟುಮ್ಬಿಗಳ ಅವಿರತ ಶ್ರಮದಿಂದಾಗಿ ಈಗ ಬ್ಲಾಗ್ ರಚನೆಯು ಸುಲಭವಾಗಿದೆ. ಕನ್ನಡದಲ್ಲೂ ಸಾಧ್ಯವಾಗಿದೆ. ಇದರ ಪ್ರಯೋಜನವನ್ನು ಪಡೆದು ಬ್ಲಾಗ್ ಮೂಲಕ ನನ್ನ ಪ್ರಯತ್ನವನ್ನು ಮುಂದುವರಿಸೋಣವೆಂದುಕೊಂಡು ಈ ಬ್ಲಾಗನ್ನು ರಚಿಸಿದೆ.
ಮುಂದುವರಿಯುತ್ತದೆ ...